Friday, November 4, 2022

ನಿನ್ನೊಳಗೆ

ಮನವ ಚುಚ್ಚುವ ನೂರು ಭಾವಗಳಿಗೆ,

ನಿನ್ನ ಚುಂಬನವೇ ಗುಳಿಗೆ!

 

ಎದೆಯ ಮೀಟುವ ನೋವಿನ ಎಳೆಗೆ,

ಸಾಂತ್ವನ ಸಿಗುವುದು ನಿನ್ನೆದೆಯ ಒಳಗೆ!

 

ಕಣ್ಣೀರು ತುಂಬುವ ನನ್ನೆಲೢ ಸ್ಥಿತಿಗೆ,

ಕರವಸ್ತ್ರ ಉಂಟು ನಿನ್ನ ಆಲಿಂಗನದೊಳಗೆ!!

ತಾಯ್ತನ

ನಡೆವಾಗ - ನುಡಿವಾಗ, ನಗುವಾಗ - ನಲಿವಾಗ 
ಸದಾ ಕಾಡುತಿದೆ ನಿನ್ನ ಕಲರವ,
ಕ್ಷಣ ಉರುಳದು ನಿನ್ನ ಮರೆತು.
ಇನ್ನು ನನ್ನ ಹೆಜ್ಜೆಗಳೆಂದು ಒಂಟಿಯಾಗವು,
ಜೊತೆಯಲ್ಲಿ ಮೂಡುತಿದೆ ನಿನ್ನ ಪುಟ್ಟ ಪಾದದ ಗುರುತು.

ನನ್ನ ಜಾಗ

ನನ್ನ ನೋವ ತುಂಬಿರುವೆ ಕವನದಲ್ಲಿ,

ನಿನ್ನ ನೋವ ತುರುಕಿರುವೆ ಎಲ್ಲಿ?

ತುಂಬದಿರು ಎಂದೂ ನಿನ್ನ ಹೃದಯದಲ್ಲಿ,

ತುಂಬಿದರೆ ನಾನಿರಲು ಜಾಗವೆಲ್ಲಿ?!

Friday, June 13, 2014

ನನ್ನ ಕಣ್ಣ ಕುಡಿಗೆ..

ನವ ಸೃಷ್ಟಿಗೆ ಬಿಸುಪೇರಿದ ಮನ,
ನೀ ಈ ಜೀವದಲಿ ಉದ್ಭವಿಸಿದ ಕ್ಷಣ
ಮತ್ತೇಕೆ ಹೀಗೆನ್ನ ಕಾಡಬೇಕು?

ಒಡಲೊಳಗಿನ ಆ ಕಂಪನ,
ಮಡಿಲೊಳಗಿನ ಮೃದು ಸಿಂಚನ,
ಸೆರಗೊಳಗೆ ಸೆರೆಯಾದ ಕಂದನ
ಆ ದಿನಗಳೇಕೆ ಮನದೊಳಗೆ ತೆರೆಯಬೇಕು?

ಕೈ ಹಿಡಿದ, ಜೊತೆ ನಡೆದ
ಪುಟ್ಟ ಪಾದಗಳ ಸೊಟ್ಟ ಹೆಜ್ಜೆ ಗುರುತುಗಳ
ನೆನಪಾಗಿ ಇಂದೇಕೆ ನಾ ಕನಲಬೇಕು?

ನೀ ಬೆಳೆಯಬೇಕು, ಮುನ್ನೆಡೆಯಬೇಕು
ಕಿರುಬೆರಳಿನಾಸರೆಯ ಮೀರಿ.
ನಿನ್ನ ಕನಸುಗಳ, ನನ್ನ ಬಯಕೆಗಳ
ಸಮ್ಮಿಳಿತದ ಸಾರವ ಹೀರಿ.

ಸಾಧನೆಯ ದಾರಿಯಲಿ ಮುಂದೆ ಸಾಗು,
ಆಸರೆಯು ಬೇಕಿರಲು ನನ್ನೆಡೆಗೆ ಬಾಗು.
ನಿನ್ನೊಳಗೆ ನಾನು - ನನ್ನೊಳಗೆ ನೀನು,
ನಮಗೇಕೆ ಇನ್ನು ಬೇರಾದೇವೆಂಬ ಭಯದ ಹಂಗು?!
ನಮ್ಮೆದೆಯ ಮಡತೆಗಳಲಿ ಅನುರಣಿಸಲಿ ಸದಾ ನಗು.

Thursday, August 25, 2011

ನೀನಿಲ್ಲದ ಗುನುಗುಗಳು

ವಿರಹ - ಉಕ್ಕಿ ಹರಿಯುವ ಪ್ರೀತಿಗೆ ದೇವರು ಕಟ್ಟುವ ಅಣೆಕಟ್ಟು!
***
ತೀರದ ಕಡಲಿನಂತಾ ಪ್ರೀತಿ ನನ್ನಲ್ಲಿಟ್ಟು, ಕಡಲಾಚೆಯ ತೀರಕೆ ನೀ ಹೋಗಲೇಬೇಕೇ..??
***
ನನ್ನ ಮುಂಜಾವಿಗೆ ನಿನ್ನ ಇರುಳಿನ ನೆರಳು;
ಎದ್ದೆನೆಂದೆ, ಕಣ್ಗಳು ಅರಳಲಿಲ್ಲ
ನನ್ನ ಇರುಳಿಗೆ ನಿನ್ನ ಹಗಲಿನ ಬೆಳಕು;
ಮಲಗಿದೆನೆಂದೆ, ರೆಪ್ಪೆಗಳು ಕೂಡಲಿಲ್ಲ!!
***

Friday, July 1, 2011

ಫಲಿಸಿತು ಪ್ರೇಮ

ನಮ್ಮನೆಯ ಸೂರಂಚಲ್ಲಿ ಒಂದು ಹೂಬಳ್ಳಿ ನೆಟ್ಟೆ
ತಿಂಗಳಿಗೊಮ್ಮೆ ತಪ್ಪದೇ ಹೂಬಿಡುವ
ಅಪರೂಪದ ಬಳ್ಳಿಗೆ ನನ್ನದೇ ಹೆಸರನಿಟ್ಟೆ

ಮೂರು ದಿನ ಅರಳಿ ಮುದುಡುವ ಹೂವಿನ
ನಿರೀಕ್ಷೆಯಲ್ಲಿ ದುಂಬಿಯೊಂದು ದಿನವೂ
ಬಳ್ಳಿಯ ಮೈತಾಕುತಿತ್ತು
ದುಂಬಿಯ ಒಲವಿಗೆ ಬಳ್ಳಿಯ
ನಲಿವು ಇಮ್ಮಡಿಸುತಿತ್ತು

ಬಿಸಿಲು ಏರಲಿ, ಬೆಳಕು ಜಾರಲಿ
ಬಳ್ಳಿಗೆ ದುಂಬಿಯ ಝೇಂಕಾರವೇ ಸರ್ವಸ್ವ
ವಸಂತ ಹೊರಳಲಿ, ವರ್ಷ ಕರಗಿ ಹರಿಯಲಿ
ದುಂಬಿಗೆ ಬಳ್ಳಿಯ ವಯ್ಯಾರವೇ ಅಸ್ತಿತ್ವ.

ಹೂವರಳಿ ಬಳ್ಳಿ ಸೊಬಗಾದರೆ
ದುಂಬಿಗೆ ಹಬ್ಬದೂಟ
ಹೂವು ಮುದುಡಿ ಜಾರಿತೇ,
ಮುಂದಿನ ಮೊಗ್ಗಿನ ನಿರೀಕ್ಷೆಯಲ್ಲಿ
ಸಾಗುವುದು ದಿನದಾಟ

ಮಾಸಗಳು ಮರಳಿದವು,
ಋತುಗಳು ಹಿಂತಿರುಗಿದವು
ಹೂವು ಅರಳಿತು, ಮುದುಡಿತು
ಜೀವ ಜಾರದೆ ಹೀಚು ಕಟ್ಟಿತು!

ಬಳ್ಳಿ ಬಾಗಿದೆ ಫಲದ ಭಾರಕೆ
ದುಂಬಿ ಬೀಗಿದೆ ಹಮ್ಮು ಹೆಮ್ಮೆಗೆ,
ಫಲವು ಮಾಗಲಿ, ಹಣ್ಣು ತೂಗಲಿ
ಜಗವ ಉಳಿಸಿ ಬೆಳೆಸಲಿ ಇಂಥ ಪ್ರೇಮ!!

Monday, December 20, 2010

ಮಳೆಯೊಡನೆ ಒಂದು ಸ್ಮರಣೆ

ಸುರಿವ ಬಿರುಮಳೆಯ
ಹನಿಯ ಅಡಿಯಲ್ಲಿ,
ಚಿಕ್ಕ ಮಗುವಂತೆ ಹೋಗಿ ನಿಲ್ಲುವಾಸೆ

ಒಳಗೆ ಹೆದರಿದ ಅಮ್ಮ
ಬಂದು ಕರೆಯುವ ಮುನ್ನ,
ಮರದ ಅಡಿಯಲಿ ನಿಂತು ನಲಿಯುವಾಸೆ

ಕೆಸರು ಕಾಲಲಿ ಬಂದು,
ಒದ್ದೆ ಮೈಯಲಿ ನಿಂದು,
ಅಪ್ಪನೆದುರಲಿ ಅಡಗಿ ನಡುಗುವಾಸೆ.

ಓ ಸುರಿವ ಬಿರುಮಳೆಯೆ,
ಮತ್ತೆ ಬಾಲ್ಯವ ಬಾಳಲ್ಲಿ ಸ್ಪುರಿಸು,
ಹಳೆಯ ಅನುಭವ ಮತ್ತೆ ಪಡೆಯುವಾಸೆ..