Wednesday, August 25, 2010

ತೀರದ ಬಯಕೆ

ನನ್ನ ಅಂಗೈಯಮೇಲೆ
ನಿನ್ನ ಭರವಸೆಗಳ ಕರ್ಪೂರ ಉರಿಸಿ
ನೆಡೆಸಿದೆ ಪ್ರೀತಿ ಹರಕೆಯ ಪರೀಕ್ಷೆ.

ಕರ್ಪೂರ ಕರಗಿ ಕಂಪು ತೀರಿದೆ
ಬಿರು ಬಿಸಿಯೂ ಆರಿ ಕಪ್ಪು ಕಲೆಯಾಗಿದೆ
ಈಡೇರಿಸು ನನ್ನ ನಿರೀಕ್ಷೆ,
ಕೊನೆಗಾಣಿಸು ಈ ಭ್ರಮಾ ಬದುಕಿನ ಶಿಕ್ಷೆ.

Monday, July 12, 2010

ನಾ ಸ್ವಾರ್ಥಿಯಾದೆ

ಮರೆತು ಬಿಡು ನಿನ್ನೆಗಳ ನೆನಪನ್ನು
ಜೊತೆಯಾಗಿ ನಕ್ಕ ದಿನಗಳನು..

ಮತ್ತೆ ಎಣಿಸದಿರು ಅತ್ತು ಹಗುರಾದ ಕಣ್ಹನಿಗಳನು
ನೋವ ಮರೆತು ನಲಿದ ನೂರು ಕ್ಷಣಗಳನು..

ನನಗೆ ನನ್ನದೇ ದಾರಿಯಲಿ
ಹೊಸ ನೆನ್ನೆಗಳಿವೆ ನೆನೆಯಲು,ನಲಿಯಲು..
ಹೊಸ ನಾಳೆಗಳಿವೆ ಹಳೆಯ ನೋವುಗಳ ಮರೆಸಲು..

ನಿನ್ನ ಕತ್ತಲೆ ಬದುಕಲ್ಲಿ ಮತ್ತೆ ಮತ್ತೆ ನೆನೆಯದಿರು ನನ್ನನ್ನು
ನಿನ್ನೆದೆಯಲ್ಲಿ ಮೀಟುವ ನೋವು
ಅಳಿಸದಿರಲಿ ನನ್ನ ಬದುಕಿನ ಬೆಳಕನ್ನು..

Tuesday, June 29, 2010

ಹಾರೈಕೆ

ಸದಾ ನಿನ್ನ ಕಣ್ಣಂಚಿನ ಖುಷಿಯಲ್ಲಿ
ನನಗೊಂದು ಸಣ್ಣ ಪಾಲಿರಲಿ.
ರೆಪ್ಪೆಯಡಿ ಕಣ್ಣ ಹನಿ ಮೂಡಿದಲ್ಲಿ
ನಿನ್ನ ನೋವ ಹಿಂದಿನ ಮೌನ ನಾನಾಗದಿರಲಿ..

Monday, June 21, 2010

ಹೂದುಂಬಿ

ಅರಳಿದೆ ಹೂ ಮನಸು
ಮರಳಿದೆ ದುಂಬಿಯ ಕನಸು
ಒಲವ ಮಕರಂದದಿ ತೊಯ್ದ
ಜೀವಕೆ ಇನ್ನೇನು ಬೇಕು ಸೊಗಸು..

ನಾ ಹೂವು, ನೀ ದುಂಬಿ
ಜೇನು ನಮ್ಮ ಬದುಕು !

Friday, January 8, 2010

ಪ್ರೀತಿ ಮಳೆ

ಮೋಡ ಕಟ್ಟಿದ ಮುಗಿಲಿಗೆ
ಮಳೆಯ ಸುರಿಸಿ ತಂಪನೀಯುವ ಬಯಕೆ;
ಮೌನ ತುಂಬಿದ ಮನಸಿಗೆ
ಪ್ರೀತಿ ಹರಿಸಿ ನಿನ್ನ ನಗಿಸುವ ಹರಕೆ!

ಮನಸು ಮುಳ್ಳಾಗಿದೆ

ಹೃದಯಕ್ಕೆ ಕುಕ್ಕಿದ ಮುಳ್ಳನು ಕಿತ್ತೆನೆಂದು
ನಿಡುಸುಯ್ಯುವ ಮೊದಲೇ
ತುಂಡಾಗಿ ಉಳಿದುಹೋದ ಮುಳ್ಳುಗಳು ಚುಚ್ಚುತ್ತಿವೆ;
ಸುಳ್ಳು ಸಮಾಧಾನಗಳಿಂದ ಮನಸ ಮುಚ್ಚಬಹುದೇ?
ಮುಚ್ಚಿಟ್ಟ ಗಾಯ ಮಾಯುವುದೇ??

Thursday, December 24, 2009

ಪರಾವಲಂಬಿ

ನಾ ನಿನ್ನ ಮೇಲೆ ಅವಲಂಬಿ
ಹೊರಲಾರದ ಜವಾಬ್ದಾರಿಗಳಿಗಲ್ಲ,
ಹುಟ್ಟುವ ಮಕ್ಕಳ ಭವಿಷ್ಯ ಬರೆಯುವುದಕ್ಕಲ್ಲ.
ನೀನಾಡುವ ಪ್ರೀತಿ ಮಾತುಗಳ ಆಲೈಸಲು.

ನಾ ನಿನ್ನ ಮೇಲೆ ಅವಲಂಬಿ
ಒಂಟಿಯಾಗಿ ಎದುರಿಸಲಾರದ ಸಂಕಟಗಳಿಗಲ್ಲ,
ಒಬ್ಬಳೇ ಓಡಾಡಲಾರದ ಅಸಹಾಯಕತೆ ಇಲ್ಲ.
ನಿನ್ನ ಕಣ್ಣಲ್ಲಿ ನನ್ನ ಬಿಂಬ ಕಾಣಲು.

ನಾ ನಿನ್ನ ಮೇಲೆ ಅವಲಂಬಿ
ದಿನದಿನದ ಪರದಾಟದ ಪರಿಹಾರಕಲ್ಲ,
ಜಗತ್ತು ನೀಡದ ಭದ್ರತೆಯ ನಿನ್ನಲ್ಲಿ ಹೊಂದುವುದಕ್ಕಲ್ಲ,
ನಿನ್ನ ಭವಿಷ್ಯದಲ್ಲಿ ನನ್ನ ಬದುಕನು ಹುಡುಕಲು.