Thursday, December 24, 2009

ಪರಾವಲಂಬಿ

ನಾ ನಿನ್ನ ಮೇಲೆ ಅವಲಂಬಿ
ಹೊರಲಾರದ ಜವಾಬ್ದಾರಿಗಳಿಗಲ್ಲ,
ಹುಟ್ಟುವ ಮಕ್ಕಳ ಭವಿಷ್ಯ ಬರೆಯುವುದಕ್ಕಲ್ಲ.
ನೀನಾಡುವ ಪ್ರೀತಿ ಮಾತುಗಳ ಆಲೈಸಲು.

ನಾ ನಿನ್ನ ಮೇಲೆ ಅವಲಂಬಿ
ಒಂಟಿಯಾಗಿ ಎದುರಿಸಲಾರದ ಸಂಕಟಗಳಿಗಲ್ಲ,
ಒಬ್ಬಳೇ ಓಡಾಡಲಾರದ ಅಸಹಾಯಕತೆ ಇಲ್ಲ.
ನಿನ್ನ ಕಣ್ಣಲ್ಲಿ ನನ್ನ ಬಿಂಬ ಕಾಣಲು.

ನಾ ನಿನ್ನ ಮೇಲೆ ಅವಲಂಬಿ
ದಿನದಿನದ ಪರದಾಟದ ಪರಿಹಾರಕಲ್ಲ,
ಜಗತ್ತು ನೀಡದ ಭದ್ರತೆಯ ನಿನ್ನಲ್ಲಿ ಹೊಂದುವುದಕ್ಕಲ್ಲ,
ನಿನ್ನ ಭವಿಷ್ಯದಲ್ಲಿ ನನ್ನ ಬದುಕನು ಹುಡುಕಲು.

Tuesday, December 22, 2009

ವಿರಹ

ನಿನ್ನ ತೋಳಲಿ ಕಳೆವ
ಪ್ರತಿಯೊಂದು ಘಳಿಗೆ,
ನೀನಿರದ ರಾತ್ರಿಗಳಿಗೆ
ನಿದ್ದೆ ಗುಳಿಗೆ!

Thursday, December 17, 2009

ನಿನದೆ ನೆನಪು

ತಣ್ಣಗೆ ಕೊರೆವ ಚಳಿಯಲಿ,
ಎಳೆ ಬಿಸಿಲಿನ ಸುಳಿಯಲಿ
ಬೆಚ್ಚಗೆ ಮನವ ಕಾಡುವುದು ನಿನ್ನ ನೆನಪು.

ಸುಡುವ ಉರಿ ಬಿಸಿಲಲಿ,
ಜಿನುಗುವ ಹನಿ ಬೆವರಲಿ
ತಂಪಗೆ ಬೀಸುವ ತಂಗಾಳಿ ನಿನ್ನ ನೆನಪು.

ಸಂಜೆ ತೆಳು ಬೆಳಕಲ್ಲಿ,
ತಿಳಿಯಾಗಸದ ಕೆಂಪು ಕಿತ್ತಳೆ ಬಣ್ಣದಲಿ
ಎದೆಯೊಳಗರಳುವ ರಂಗವಲ್ಲಿ ನಿನ್ನ ನೆನಪು.

ಕತ್ತಲು ಕವಿದ ಮುಗಿಲಲ್ಲಿ
ಹೆಜ್ಜೆ ಕಾಣದ ಬದುಕ ದಾರಿಯಲಿ
ಬೆಳದಿಂಗಳ ಬೆಳಕು ನಿನ್ನ ನೆನಪು..

Wednesday, December 9, 2009

ರವಿ ಕಾಣದ್ದು ಕವಿ ಕಂಡಾಗ

ಒಂಟಿತನದ ಕರಿಛಾಯೆಯಡಿ ಕರಗುತ್ತಿದ್ದೇನೆ,
ಮಳೆ ತಾರದೆ ಓಡುವ ಬರಮೋಡಗಳಂತೆ
ನನ್ನ ನೋವುಗಳು ಕಣ್ಣೀರ ಸುರಿಸದೆ ಕಾಡುತ್ತಿವೆ
ಇದ್ದಕ್ಕಿದ್ದಂತೆ ಆ ಹಳದಿ ಮೈದಾನದೆಡೆಗೆ ಯಾರೋ..
ಆ ಬಂಗಾರದ ಬಯಲೆಡೆಗೆ ಯಾರೋ.. ಸೆಳೆದಂತಿದೆ
ನೋವಿಗೆ ನಗೆಯ ಸೆಲೆ ಅಲ್ಲಿ ಕಂಡೀತೆ?

ಓ ಅಲ್ಲಿ,ಇಲ್ಲೆ ಬಳಿಯಲ್ಲಿ,ನನ್ನ ಕೆಲದಲ್ಲಿ ಸೂರ್ಯಕಾಂತಿಯ ಸಂತೆ
ತಂಗಾಳಿಗೆ ತಲೆದೂಗುತ,ತಮ್ಮ ಕಾಂತನ ಅರಸುತ ಷೋಡಶಿಯರು ನಿಂತಂತೆ
ಅರಳಿತು ನನ್ನ ಮನ,ಹೂವುಗಳ ತೂಗಾಟಕ್ಕೆ ನೋವುಗಳ ಮರೆತಂತೆ
ಕುಣಿಯಿತು ಮೈ-ಮನ ಹೂವೊಡನೆ ನಾನೊ,ಹೂವೆ ನಾನೊ ಎಂಬಂತೆ
ಹೇಗೆ ಸುಮ್ಮನಿದ್ದೀತು ಹೃದಯ ಇಂತ ಸಂಗಾತಿಯ ಜೊತೆ.
* * * *
ಆ ಸೂರ್ಯಕಾಂತಿ ತನ್ನೆಲ್ಲ ಕಾಂತಿಯನು ನನ್ನಲ್ಲಿ ತುಂಬಿತ್ತು.
ಆ ದಿನ..ಆ ಹೂರಾಶಿಯ ನೋಡಿದ ದಿನ ಭೂತದಲ್ಲಿ ಭೂತವಾಗಿ ಹೋಗಿದೆ.
ನಾ ಓಂಟಿಯಾಗಿ ಓಡಾಡುವಾಗೆಲ್ಲ ಮತ್ತದೇ ನೆನಪು
ಹಸಿ ಹಸಿಯಾಗುತ್ತದೆ,ಮನವ ತಣಿಸಿ ಕುಣಿಸುತ್ತದೆ.
ಹಿಂಸಿಸುವ ಏಕಾಂಗಿತನ ಹಿತತರುವ ಏಕಾಂತವಾಗುತ್ತದೆ.

ಸೂರ್ಯನವರೆಗೂ ಸಾಲುಗಟ್ಟಿ ನಿಂತಿರುವ ಆ ಸೂರ್ಯಕಾಂತಿಗಳಂತೆ
ನನ್ನ ಕಲ್ಪನೆಗಳೂ ಅಂತ್ಯ ಕಾಣದೆ ಮುಂದೋಡುತ್ತವೆ.
ಕವಿಯಾದದ್ದಕ್ಕೆ ಸಾರ್ಥಕವಾಯ್ತೆನಿಸಿ ಹೂವುಗಳ ನೆನಪಿಂದ
ತನು-ಮನ ಇಹವನ್ನು ಮರೆಯುತ್ತದೆ!

ನನ್ನೊಳಗಿನ ನೀನು

ನೀನೇನೆಂದು ಅರಿವಾಗುವ
ಮೊದಲೇ ಬದಲಾಗಿ ಹೋಗುವೆ.
ನಿನ್ನೊಳಗಿನ ಪ್ರತಿ ಮಿಳಿತ
ಏರಿಳಿತಗಳ ಅನುಭವಿಸಿ
ಅಥೈಸಿಕೊಂಡವರಿಗೂ ಒಗಟಾಗಿರುವೆ

ಯಾರಿಗಾಗಿ ಈ ನಿಗೂಢತೆ?
ಯಾತಕಾಗಿ ಈ ಅನಿಶ್ಚಿತತೆ?
ಅಥವಾ ನೀನಾರೆಂಬುದು ನಿನಗೇ ಪ್ರಶ್ನೆಯೆ?

ಉತ್ತರ ಹುಡುಕಿ,ನೀ ಹತ್ತಿರ ಬಂದು
ನಕ್ಕರೆ ಸಾಕು,ಸುತ್ತಲ ಜಗತ್ತು
ಬೆಚ್ಚಗೆ ಬೆಳಗುತ್ತದೆ;
ಮೌನವೂ ಮಾತಾಡುತ್ತದೆ!

ಮಾಸದ ಕವಿತೆ

ನನ್ನ ಕವನ ಒದ್ದೆ ಹಾಳೆಯ ಮೇಲೆ
ಕೆಂಪು ಶಾಯಿಯಲಿ ಬರೆದ ಅಕ್ಷರ ಮಾಲೆ.
ಓದುಗರಿಗದು ಮಬ್ಬು, ಮಾಸಲು, ಮಸುಕು.
ನನಗೋ,ಮಾಸದ ಮನದ ಗಾಯಕ್ಕೆಳೆದ ಮುಸುಕು!

ಕಂಬನಿ ಹಾಡು

ಹಾಡುವ ದನಿಗೊಂದು ಆಲೈಸುವ ಶ್ರೋತೃ ಬೇಕು.
ಹರಿವ ಕಣ್ಣೀರಿಗೆ ತಬ್ಬಿ ಓಲೈಸುವ ತೋಳು ಬೇಕು.
ಈ ಜಗದಲ್ಲಿ ಕೇಳದೆ ಮುಗಿವ ಹಾಡುಗಳೆಷ್ಟೋ,
ಒರೆಸದೆ ಜಾರುವ ಕಣ್ಹನಿಗಳೆಷ್ಟೋ..

ಬಯಕೆ ಬಳ್ಳಿ

ಒಡಲಲಿ ಮೊಳೆಯುವ
ಸುಖದ ಹೂಬಳ್ಳಿಗೆ
ಅರಳಿ ಬಳುಕುವ ಬಯಕೆ.
ನೀರೆರೆಯದೆ ಬೆಳೆವ ತರುವಿಗೆ
ಹೂ-ಹಣ್ಣು ಬರಿಯ ಕನಸೆ!

Monday, December 7, 2009

ರಾತ್ರಿಗಳಿಗೊಂದು ನಿ-ವೇದನೆ

ಕತ್ತಲ ಹೊದಿಕೆಯೊಳಗೆ ತೂರಿ,
ಕಣ್ಮುಚ್ಚಿ ಮಲಗಿದರೆ ಎದೆಯೊಳಗೆ
ನಿನ್ನ ನೆನಪಿನ ಬೆಳಕು.
ಬೆಚ್ಚನೆ ಚಾದರವ ಹೊದ್ದು ಹೊರಳಿದರೆ,
ಕರುಳ ಸುಳಿಯಲ್ಲಿ ನಿನ್ನ ಕನಸಿನ ತಂಗಾಳಿ ಛಳಕು.

ತಾಪವೇರದ ತಂಪು ರಾತ್ರಿಗಳೆ,
ಕತ್ತಲ ತೋಳಿಗೆ ಜಾರದೆ
ಬೆಳಗಾಗುವ ಇರುಳುಗಳೆ,
ಮರಳದಿರಿ ಮತ್ತೆ ಮತ್ತೆ,
ಅರಳಬೇಕಿದೆ ನಮ್ಮ ಸುಂದರ ಬದುಕು.

ನಿರೀ-ಕ್ಷಣ

ನಿನ್ನ ಬರವಿಗೆ ಎದುರುನೋಡುತ
ಕನಸುಗಳ ಹರವಿ ಕುಳಿತಿರುವೆ.
ಸವಿನೆನಪುಗಳ ಬದುಕಿನೊಳಗೆ
ಮತ್ತೆ ಮರಳಿಸೋಣ,
ಮರೆತ ಹಾಡುಗಳ
ತಿರುಗಿ ಗುನುಗೋಣ;
ನೆನಪುಗಳೂ ಕನಸಾಗುವ
ಮೊದಲು ನನ್ನ ಸೇರು ಬಾ..

ದುಃಖಿ

ನಿನ್ನೆದೆಯ ಬೆಚ್ಚನೆಯ ಗೂಡಲ್ಲಿ
ಲೋಕವರಿಯದ ಗುಬ್ಬಿಯಾಗಿದ್ದೆ ನಾನು.
ಬಂಧನ ಬಿಡಿಸಿ
ನೀಲ ಬಾನಿಗೆ ತೂರಿಬಿಟ್ಟೆ ನೀನು.
ಪಂಜರವ ತೆರೆದವನಂತೆ
ನೀ ತ್ಯಾಗಿಯಾಗಿ ಬೀಗಿದೆ.
ಹಾರಲಾರದೆ,ನಿನ್ನೆದೆಯ ತೊರೆಯಲಾರದೆ
ನಾ ನಿನಗಾಗಿ ಬಿಕ್ಕಿದೆ!

ಅಂತರಾವಲೋಕನ

ನಾವು ಒಬ್ಬರ ಮುಂದೊಬ್ಬರು
ಬೆಳಕಲ್ಲಿ ಬೆತ್ತಲಾಗಬೇಕಿದೆ,
ನಮ್ಮ ನಮ್ಮ ಅಂತರಂಗದ
ಅಸಂತೃಪ್ತ ಬಯಕೆಗಳು
ಕೊಳೆತು ಕರಗುವ ಮುನ್ನ!

ಮುಸ್ಸಂಜೆ ಮಾತು

ಸಂಜೆಗಳು ನೀನಿಲ್ಲದೆ ಕೈಜಾರುತಿರುವಾಗ
ರಾತ್ರಿಗಳು ಜಾರದಿರಲೆಂಬಂತೆ ಕೋಣೆಯಲಿ ಬಂಧಿಸಿಟ್ಟೆ.
ರಾತ್ರಿಗೆ ಹಗಲು,
ಬಂಧನಕೆ ಬಿಡುಗಡೆಯೆ ಭವಿಷ್ಯ,
ನನಗೇ..??

ಬದುಕೇ ನೀ ಉರುಳು

ರಾತ್ರಿ ಉರುಳಿದರೆ ಕ್ರೂರ ಹಗಲು,

ಪ್ರೀತಿ ಉರುಳಿದರೆ ಒಂಟಿತನದ ನೆರಳು;

ನಾ ಹೊರಳಿದರೆ ಅದೇ ಶಯ್ಯೆ,

ಹುಡುಕುವೆ ನಿನ್ನ ಬೆಚ್ಚನೆ ಮಗ್ಗುಲು!

ಸಂಬಂಧ

ಸಂಬಂಧಗಳು ಕಳಚಿಟ್ಟ ಬಟ್ಟೆಗಳಂತೆ.

ಮೈಮೇಲಿದ್ದಷ್ಟು ಹೊತ್ತು ಅಸ್ತಿತ್ವ.

ಮತ್ತೆ ಕಂಡಾಗಲೆಲ್ಲ,ತೊಳೆದು ಧರಿಸಬೇಕೋ,

ಮಡಚಿ ಸುತ್ತಿ ಎತ್ತಿಡಬೇಕೋ ಎಂಬ ಗೊಂದಲ!

Friday, November 20, 2009

ಸುಖೀ ನಿನ್ನ ಸಖೀ

ದಿನದ ದಣಿವೆಲ್ಲ
ಕ್ಷಣದಿ ಕರಗಿದವಲ್ಲ,
ಸೋತ ಮೈ-ಮನವೆಲ್ಲ
ಮತ್ತೆ ಅರಳಿದವಲ್ಲ.
ಇದು ನಿನ್ನ ಪ್ರೀತಿಯ ರೀತಿ
ಯಾವ ದೇವರ ಪವಾಡವಲ್ಲ!