Thursday, August 25, 2011

ನೀನಿಲ್ಲದ ಗುನುಗುಗಳು

ವಿರಹ - ಉಕ್ಕಿ ಹರಿಯುವ ಪ್ರೀತಿಗೆ ದೇವರು ಕಟ್ಟುವ ಅಣೆಕಟ್ಟು!
***
ತೀರದ ಕಡಲಿನಂತಾ ಪ್ರೀತಿ ನನ್ನಲ್ಲಿಟ್ಟು, ಕಡಲಾಚೆಯ ತೀರಕೆ ನೀ ಹೋಗಲೇಬೇಕೇ..??
***
ನನ್ನ ಮುಂಜಾವಿಗೆ ನಿನ್ನ ಇರುಳಿನ ನೆರಳು;
ಎದ್ದೆನೆಂದೆ, ಕಣ್ಗಳು ಅರಳಲಿಲ್ಲ
ನನ್ನ ಇರುಳಿಗೆ ನಿನ್ನ ಹಗಲಿನ ಬೆಳಕು;
ಮಲಗಿದೆನೆಂದೆ, ರೆಪ್ಪೆಗಳು ಕೂಡಲಿಲ್ಲ!!
***

Friday, July 1, 2011

ಫಲಿಸಿತು ಪ್ರೇಮ

ನಮ್ಮನೆಯ ಸೂರಂಚಲ್ಲಿ ಒಂದು ಹೂಬಳ್ಳಿ ನೆಟ್ಟೆ
ತಿಂಗಳಿಗೊಮ್ಮೆ ತಪ್ಪದೇ ಹೂಬಿಡುವ
ಅಪರೂಪದ ಬಳ್ಳಿಗೆ ನನ್ನದೇ ಹೆಸರನಿಟ್ಟೆ

ಮೂರು ದಿನ ಅರಳಿ ಮುದುಡುವ ಹೂವಿನ
ನಿರೀಕ್ಷೆಯಲ್ಲಿ ದುಂಬಿಯೊಂದು ದಿನವೂ
ಬಳ್ಳಿಯ ಮೈತಾಕುತಿತ್ತು
ದುಂಬಿಯ ಒಲವಿಗೆ ಬಳ್ಳಿಯ
ನಲಿವು ಇಮ್ಮಡಿಸುತಿತ್ತು

ಬಿಸಿಲು ಏರಲಿ, ಬೆಳಕು ಜಾರಲಿ
ಬಳ್ಳಿಗೆ ದುಂಬಿಯ ಝೇಂಕಾರವೇ ಸರ್ವಸ್ವ
ವಸಂತ ಹೊರಳಲಿ, ವರ್ಷ ಕರಗಿ ಹರಿಯಲಿ
ದುಂಬಿಗೆ ಬಳ್ಳಿಯ ವಯ್ಯಾರವೇ ಅಸ್ತಿತ್ವ.

ಹೂವರಳಿ ಬಳ್ಳಿ ಸೊಬಗಾದರೆ
ದುಂಬಿಗೆ ಹಬ್ಬದೂಟ
ಹೂವು ಮುದುಡಿ ಜಾರಿತೇ,
ಮುಂದಿನ ಮೊಗ್ಗಿನ ನಿರೀಕ್ಷೆಯಲ್ಲಿ
ಸಾಗುವುದು ದಿನದಾಟ

ಮಾಸಗಳು ಮರಳಿದವು,
ಋತುಗಳು ಹಿಂತಿರುಗಿದವು
ಹೂವು ಅರಳಿತು, ಮುದುಡಿತು
ಜೀವ ಜಾರದೆ ಹೀಚು ಕಟ್ಟಿತು!

ಬಳ್ಳಿ ಬಾಗಿದೆ ಫಲದ ಭಾರಕೆ
ದುಂಬಿ ಬೀಗಿದೆ ಹಮ್ಮು ಹೆಮ್ಮೆಗೆ,
ಫಲವು ಮಾಗಲಿ, ಹಣ್ಣು ತೂಗಲಿ
ಜಗವ ಉಳಿಸಿ ಬೆಳೆಸಲಿ ಇಂಥ ಪ್ರೇಮ!!