ನಮ್ಮನೆಯ ಸೂರಂಚಲ್ಲಿ ಒಂದು ಹೂಬಳ್ಳಿ ನೆಟ್ಟೆ
ತಿಂಗಳಿಗೊಮ್ಮೆ ತಪ್ಪದೇ ಹೂಬಿಡುವ
ಅಪರೂಪದ ಬಳ್ಳಿಗೆ ನನ್ನದೇ ಹೆಸರನಿಟ್ಟೆ
ಮೂರು ದಿನ ಅರಳಿ ಮುದುಡುವ ಹೂವಿನ
ನಿರೀಕ್ಷೆಯಲ್ಲಿ ದುಂಬಿಯೊಂದು ದಿನವೂ
ಬಳ್ಳಿಯ ಮೈತಾಕುತಿತ್ತು
ದುಂಬಿಯ ಒಲವಿಗೆ ಬಳ್ಳಿಯ
ನಲಿವು ಇಮ್ಮಡಿಸುತಿತ್ತು
ಬಿಸಿಲು ಏರಲಿ, ಬೆಳಕು ಜಾರಲಿ
ಬಳ್ಳಿಗೆ ದುಂಬಿಯ ಝೇಂಕಾರವೇ ಸರ್ವಸ್ವ
ವಸಂತ ಹೊರಳಲಿ, ವರ್ಷ ಕರಗಿ ಹರಿಯಲಿ
ದುಂಬಿಗೆ ಬಳ್ಳಿಯ ವಯ್ಯಾರವೇ ಅಸ್ತಿತ್ವ.
ಹೂವರಳಿ ಬಳ್ಳಿ ಸೊಬಗಾದರೆ
ದುಂಬಿಗೆ ಹಬ್ಬದೂಟ
ಹೂವು ಮುದುಡಿ ಜಾರಿತೇ,
ಮುಂದಿನ ಮೊಗ್ಗಿನ ನಿರೀಕ್ಷೆಯಲ್ಲಿ
ಸಾಗುವುದು ದಿನದಾಟ
ಮಾಸಗಳು ಮರಳಿದವು,
ಋತುಗಳು ಹಿಂತಿರುಗಿದವು
ಹೂವು ಅರಳಿತು, ಮುದುಡಿತು
ಜೀವ ಜಾರದೆ ಹೀಚು ಕಟ್ಟಿತು!
ಬಳ್ಳಿ ಬಾಗಿದೆ ಫಲದ ಭಾರಕೆ
ದುಂಬಿ ಬೀಗಿದೆ ಹಮ್ಮು ಹೆಮ್ಮೆಗೆ,
ಫಲವು ಮಾಗಲಿ, ಹಣ್ಣು ತೂಗಲಿ
ಜಗವ ಉಳಿಸಿ ಬೆಳೆಸಲಿ ಇಂಥ ಪ್ರೇಮ!!
Friday, July 1, 2011
Subscribe to:
Posts (Atom)